ಚಿತ್ರಾಂಗದೆ -
 	
ಮಹಾಭಾರತದಲ್ಲಿ ಕಂಡುಬರುವ ಒಂದು ಉದಾತ್ತ ಸ್ತ್ರೀ ಪಾತ್ರ. ಈಕೆ ಮಣಲೂರಿನ ರಾಜ ಚಿತ್ರವಾಹನನ ಏಕಮಾತ್ರ ಪುತ್ರಿ. ಪುತ್ರರಿಲ್ಲದ ಆ ರಾಜ ಇವಳನ್ನೇ ಮಗನೆಂದು ತಿಳಿದು ಸಕಲ ವಿದ್ಯೆಗಳನ್ನೂ ಕಲಿಸಿದ. ಈಕೆ ಪುರುಷೋಚಿತವಾದ ಬಿಲ್ಲುವಿದ್ಯೆ, ಕತ್ತಿವರಸೆ ಮೊದಲಾದ ರಣವಿದ್ಯೆಗಳನ್ನು ಕಲಿತು ಹೆಣ್ಣಿನ ಲಾಲಿತ್ಯಕ್ಕೆ ಬದಲಾಗಿ ಗಂಡಿನ ಸ್ವಭಾವ ಸಿದ್ಧವಾದ ಕಾಠಿಣ್ಯ ಮತ್ತು ಒರಟುತನಗಳನ್ನು ಮೈಗೂಡಿಸಿಕೊಂಡು ಬೆಳೆದು ತಾರುಣ್ಯಕ್ಕೆ ಅಡಿಯಿಟ್ಟಳು. ಮುಂದೆ ಅರ್ಜುನ ಇವಳನ್ನು ಮದುವೆಯಾದ. ಬಭ್ರುವಾಹನ ಇವರ ಮಗ. ಅಶ್ವಮೇಧಕ್ಕೆ ಮೊದಲು ದಿಗ್ವಿಜಯ ಹೊರಟ ಅರ್ಜುನನನ್ನು ಬಭ್ರುವಾಹನ ಕೊಲ್ಲಲಾಗಿ ಚಿತ್ರಾಂಗದೆ ಬಹಳ ದುಃಖಪಟ್ಟು ಉಲೂಪಿಯ ಮೂಲಕ ಸಂಜೀವನ ರತ್ನವನ್ನು ತರಿಸಿ ಪತಿಯನ್ನು ಬದುಕಿಸಿದಳು. ಅಶ್ವಮೇಧಯಾಗಕ್ಕೆ ಚಿತ್ರಾಂಗದೆ ಹಸ್ತಿನಾವತಿಗೆ ಬಂದಿದ್ದಳು. ಪಾಂಡವ ಮಹಾಪ್ರಸ್ಥಾನದ ಬಳಿಕ ಈಕೆ ಮತ್ತೆ ಮಣಲೂರಿಗೆ ಹಿಂತಿರುಗಿದಳು. ಇಷ್ಟು ಮಹಾಭಾರತದಲ್ಲಿ ಬರುವ ಈಕೆಯ ವೃತ್ತಾಂತ.

	ಚಿತ್ರಾಂಗದೆಯ ಕಥೆ ವ್ಯಾಸಮಹಾಭಾರತದ ಮಹಾಸಾಗರದಲ್ಲಿ ಕೇವಲ ಬಿಂದು ಮಾತ್ರವಾಗಿದೆಯಷ್ಟೆ. ಕನ್ನಡ ಜೈಮಿನಿ ಭಾರತದಲ್ಲಿ ಅರ್ಜುನ ಬಭ್ರುವಾಹನರ ಕಾಳಗದ ಪ್ರಸಂಗದಲ್ಲಿ ಚಿತ್ರಾಂಗದೆ ಕ್ಷಣಮಾತ್ರ ಮಿಂಚಿ ಮಿನುಗುತ್ತಾಳೆ. ಇಲ್ಲಿ ಆಕೆಯ ಜೀವನದ ಉತ್ತರಾರ್ಧದ ಚಿತ್ರವಿದೆ. ರವೀಂದ್ರನಾಥ ಠಾಗೂರರ ಚಿತ್ರಾನಾಟಕದಲ್ಲಿ ಚಿತ್ರಾಂಗದೆಯ ಪೂರ್ವಜೀವನದ ಶೃಂಗಾರಪೂರ್ಣ ಬದುಕಿನ ಚಿತ್ರವಿದೆ. ಮಹಾಕವಿ ಕುವೆಂಪು ಅವರ ಚಿತ್ರಾಂಗದಾ ಎಂಬ ಖಂಡಕಾವ್ಯದಲ್ಲಿ ಚಿತ್ರಾಂಗದೆಯ ಪೂರ್ಣ ಬದುಕಿನ ಸುಂದರ ಹಾಗೂ ಸಮಗ್ರ ಚಿತ್ರಣವನ್ನು ಕಾಣಬಹುದು.				(ಎಂ.ಸಿ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ